ಬರೋಬ್ಬರಿ ೫-೬ ತಿಂಗಳ ನಂತರ ಮತ್ತೆ ನಾ ಬರೆದಿದ್ದನ್ನ ನಿಮ್ಮೆದುರಿಡುವ ಸಾಹಸ ಮಾಡಿದ್ದೇನೆ...ಕಾರಣವಿರದ ಯೋಚನೆಗಳು..ಉತ್ತರವಿರದ ಪ್ರಶ್ನೆಗಳು...ಏನೋ ಒಂದಿಷ್ಟು ಭ್ರಮೆಗಳು ಇವಕ್ಕೆಲ್ಲ ಒಂದು ತಾತ್ಕಾಲಿಕ ವಿರಾಮ ಕೊಟ್ಟು ಮತ್ತೆ ನಿಮ್ಮೆದುರಲ್ಲಿ ನಾ ಬರೆದಿದ್ದನ್ನು ಮುಂದಿಡುತ್ತಿದ್ದೇನೆ...ಮೊದಲಿನದೇ ಪ್ರೋತ್ಸಾಹ,ಬೆಂಬಲ,ಹಾರೈಕೆ..ಮತ್ತು ಮಾರ್ಗದರ್ಶನದ ನಿರೀಕ್ಷೆಯಲ್ಲಿ......
"ನಿವೇದನೆ"
ನಾನು ತುಂಬಾ ಚಿಕ್ಕವಳಿದ್ದಾಗ ,
ನನ್ನಪ್ಪ ಹಾಡುವುದ ಕಲಿಸುತ್ತಿದ್ದ
ಆಗೆಲ್ಲ ನಾನು ಕುಳಿತಲ್ಲೆ ಚುಕ್ಕಿ ರಂಗೋಲಿ
ಹಾಕುವುದ ಕಲಿಯುತ್ತಿದ್ದೆ..
"ಒಮ್ಮೆ ಯಾವುದಾದರು ಒಂದೇ ಕೆಲಸ ಮಾಡು",
ನನ್ನಪ್ಪ ಸಾವಧಾನವಾಗಿಯೇ ಹೇಳುತ್ತಿದ್ದ...
ನನ್ನಮ್ಮ ಹೂ ಕಟ್ಟುವುದು ಹೇಗೆಂದು ಕಲಿಸುತ್ತಿದ್ದಳು
ಆಗೆಲ್ಲ ನಾನು ಜೋರಾಗಿ ಅಪ್ಪ ಕಲಿಸಿದ
ವರಸೆಗಳನ್ನೆಲ್ಲ ಹಾಡುತ್ತಿದ್ದೆ..
"ಒಂದೇ ಕೆಲಸ ಮಾಡು ನೋಡೋಣ"ಗದರುತ್ತಿದ್ದಳು ಅಮ್ಮ
ಯಾವುದನ್ನೂ ಮಾಡಲಿಲ್ಲ ನಾನು ಸರಿಯಾಗಿ ಕೊನೆಗೆ...
ಇಂದು ನನಗೆ ಹೂ ಕಟ್ಟಲೂ ಬಾರದು: ಹಾಡಲೂ ಅಷ್ಟೆ..
ಒಮ್ಮೊಮ್ಮೆ ಮನಸ್ಸಿದ್ದರೆ ಮಾತಾಡಿ,ಮಾತಾಡಿ
ಎಲ್ಲರ ತಲೆ ತಿನ್ನುತ್ತೇನೆ...
ಮನವಿರದಿದ್ದಾಗ ಯಾರೆಷ್ಟೆ ಕೂಗಿದರು
ನನ್ನ ದನಿ ಗಂಟಲಲ್ಲೆ ಸತ್ತಿರುತ್ತದೆ..
ಒಮ್ಮೊಮ್ಮೆ ಏನೋ ಕೇಳಿದರೆ ಇನ್ನೇನೋ ಹೇಳುವುದೂ ಹೊಸತೇನಲ್ಲ
"ನಿಮ್ಮೂರಿಗೆಷ್ಟು ಹೊತ್ತಿಗೆ ಬಸ್ಸು"? ಅಂದಾಗ..
"ನಂಗೆ ಹದಿನೆಂಟು ವರ್ಷ" ಎಂದು ನಗೆಪಾಟಲಾಗಿದ್ದೇನೆ...
ಅರ್ಥಶಾಸ್ತ್ರ ತರಗತಿಯಲ್ಲಿ ಇಂಗ್ಲೀಶ್ ಪದ್ಯ ಕಾಡುತ್ತದೆ....
Keatsನ Grecian Urn ನ piperನಾನಾಗತ್ತೇನೆ
ಪತ್ರಿಕೋದ್ಯಮ ತರಗತಿಯಲ್ಲಿ ಹೆಸರೂರೊಂದು ಗೊತ್ತಿರದ
ನನ್ನ ಬಾಳ ಪಯಣದ ಅರ್ಧದಾರಿಯಲ್ಲಿ ಜೊತೆಯಾಗಿ,,
ಕೊನೆ ತನಕ ನಡೆವ ಅನಾಮಧೇಯ ಯಾರಿರಬಹುದೆಂದು,
ಕಾಲಹರಣ ಮಾಡುತ್ತೇನೆ..
ಆಗೆಲ್ಲಾ ಪೆದ್ದು ಮನಕ್ಕೆ ಬುದ್ದಿ ಗದರುತ್ತದೆ..
"ತೆಪ್ಪಗೆ ಪಾಠ ಕೇಳು..."ಎಂದು..
ನಾನೊಬ್ಬನೇ ಹೀಗಾ??
ಅಥವಾ ಎಲ್ಲರೂ ನನ್ನ ಹಾಗಾ??
ಮನದ ಪ್ರಶ್ನೆಗೆ ಬುದ್ಧಿ ಹೆಳುತ್ತದೆ..
ಪೆದ್ದಿ ನೀನೊಬ್ಬಳೇ ಹೀಗೆ
ಮನೆಯ ಮುಂದಿನಂಗಳದಲ್ಲಿ ಮಗುವಾಡುವುದು ಕಂಡಾಗ.
ನನ್ನ ಮನವು ಮಗುವಂತೆ ರಚ್ಚೆ ಹಿಡಿಯುತ್ತದೆ..
ನೀನು ಮಗುವಾಗು ಎಂದು...
ಎಂದಿಗು ಮಗುವಾಗೆ ಉಳಿಯುವುದಾದರೆ ನಿನಗೇಕೆ..ಬದುಕು..?
ಯಾವಾಗ ಹೇಗ್ಹೇಗೆ ಇರಬೇಕೋ ಹಾಗಿದ್ದರೇ ಚಂದ..
ಅದೇ ಬದುಕಿಗಂದ..ಸುಮ್ಮನಿರು..ಎಂದು..
ಮತ್ತೆ ನನ್ನ ಬುದ್ಧಿ ತನ್ನ ಕೆಲಸ ಮಾಡುತ್ತದೆ
ಇದನ್ನೆಲ್ಲ ನೋಡಿದಾಗ ನೆನಪುಗಳೆಲ್ಲ ಕಾಡಿದಾಗ,,
ಈ ಬದುಕು ಭ್ರಮೆಗಳ ಜಾಲ..ಕನಸೇ ಅದರ ಒಡಲಾಳ....
ಅಂದುಕೊಳ್ಳುತ್ತೇನೆ.....
ಮತ್ತೆ ಮನಕ್ಕೆ ಬುದ್ಧಿ ಕಿವಿಯ ಹಿಡಿಯುತ್ತದೆ
ಒಮ್ಮೆ ಕನಸ ಸಾಗರದಿಂದ ವಾಸ್ತವದಂಚಿಗೆ ಬಾ
ನೀನು ಒಂದು ಗುರಿಯಿಟ್ಟು ಅದರೆಡೆಗಗೆ ನಡೆ..
ಎಚ್ಚರಾಗು.... ಎದ್ದು ಓಡು..
ಇನ್ನು ತುಂಬಾ ದೂರ ಹೋಗಬೇಕಿದೆ ನೀನು
ಮತ್ತೆ ನಾನು ಗುರಿ ಮುಟ್ಟಿ ಜಯಶಾಲಿಯಾಗುವ ಕನಸು ಕಾಣುತ್ತೇನೆ...
ಆದರೆ ಕೇವಲ ಭ್ರಮೆಯ ಬದುಕಲಲ್ಲ..ವಾಸ್ತವದಲ್ಲಿ
ಅಪ್ಪ-ಅಮ್ಮ ಹೇಳಿದಾಗೆ ಒಂದೇ ಕೆಲಸ ಸರಿಯಾಗಿ ಮಾಡುವ
ಗಟ್ಟ್ತಿ ನಿರ್ಧಾರದಲ್ಲಿ ........