Wednesday, May 6, 2009

ಪೆದ್ದು ಮನ:ಮೊಂಡು ಬುದ್ಧಿ...

ಬರೋಬ್ಬರಿ ೫-೬ ತಿಂಗಳ ನಂತರ ಮತ್ತೆ ನಾ ಬರೆದಿದ್ದನ್ನ ನಿಮ್ಮೆದುರಿಡುವ ಸಾಹಸ ಮಾಡಿದ್ದೇನೆ...ಕಾರಣವಿರದ ಯೋಚನೆಗಳು..ಉತ್ತರವಿರದ ಪ್ರಶ್ನೆಗಳು...ಏನೋ ಒಂದಿಷ್ಟು ಭ್ರಮೆಗಳು ಇವಕ್ಕೆಲ್ಲ ಒಂದು ತಾತ್ಕಾಲಿಕ ವಿರಾಮ ಕೊಟ್ಟು ಮತ್ತೆ ನಿಮ್ಮೆದುರಲ್ಲಿ ನಾ ಬರೆದಿದ್ದನ್ನು ಮುಂದಿಡುತ್ತಿದ್ದೇನೆ...ಮೊದಲಿನದೇ ಪ್ರೋತ್ಸಾಹ,ಬೆಂಬಲ,ಹಾರೈಕೆ..ಮತ್ತು ಮಾರ್ಗದರ್ಶನದ ನಿರೀಕ್ಷೆಯಲ್ಲಿ......
                                         
                                             "ನಿವೇದನೆ"ನಾನು ತುಂಬಾ ಚಿಕ್ಕವಳಿದ್ದಾಗ ,
ನನ್ನಪ್ಪ ಹಾಡುವುದ ಕಲಿಸುತ್ತಿದ್ದ
ಆಗೆಲ್ಲ ನಾನು ಕುಳಿತಲ್ಲೆ ಚುಕ್ಕಿ ರಂಗೋಲಿ 
ಹಾಕುವುದ ಕಲಿಯುತ್ತಿದ್ದೆ..
"ಒಮ್ಮೆ ಯಾವುದಾದರು ಒಂದೇ ಕೆಲಸ ಮಾಡು",
ನನ್ನಪ್ಪ ಸಾವಧಾನವಾಗಿಯೇ ಹೇಳುತ್ತಿದ್ದ...

ನನ್ನಮ್ಮ ಹೂ ಕಟ್ಟುವುದು ಹೇಗೆಂದು ಕಲಿಸುತ್ತಿದ್ದಳು
ಆಗೆಲ್ಲ ನಾನು ಜೋರಾಗಿ ಅಪ್ಪ ಕಲಿಸಿದ 
ವರಸೆಗಳನ್ನೆಲ್ಲ ಹಾಡುತ್ತಿದ್ದೆ..
"ಒಂದೇ ಕೆಲಸ ಮಾಡು ನೋಡೋಣ"ಗದರುತ್ತಿದ್ದಳು ಅಮ್ಮ
ಯಾವುದನ್ನೂ ಮಾಡಲಿಲ್ಲ ನಾನು ಸರಿಯಾಗಿ ಕೊನೆಗೆ...
ಇಂದು ನನಗೆ ಹೂ ಕಟ್ಟಲೂ ಬಾರದು: ಹಾಡಲೂ ಅಷ್ಟೆ..

ಒಮ್ಮೊಮ್ಮೆ ಮನಸ್ಸಿದ್ದರೆ ಮಾತಾಡಿ,ಮಾತಾಡಿ
ಎಲ್ಲರ ತಲೆ ತಿನ್ನುತ್ತೇನೆ...
ಮನವಿರದಿದ್ದಾಗ ಯಾರೆಷ್ಟೆ ಕೂಗಿದರು
ನನ್ನ ದನಿ ಗಂಟಲಲ್ಲೆ ಸತ್ತಿರುತ್ತದೆ..
ಒಮ್ಮೊಮ್ಮೆ ಏನೋ ಕೇಳಿದರೆ ಇನ್ನೇನೋ ಹೇಳುವುದೂ ಹೊಸತೇನಲ್ಲ
"ನಿಮ್ಮೂರಿಗೆಷ್ಟು ಹೊತ್ತಿಗೆ ಬಸ್ಸು"? ಅಂದಾಗ..
"ನಂಗೆ ಹದಿನೆಂಟು ವರ್ಷ" ಎಂದು ನಗೆಪಾಟಲಾಗಿದ್ದೇನೆ...

ಅರ್ಥಶಾಸ್ತ್ರ ತರಗತಿಯಲ್ಲಿ ಇಂಗ್ಲೀಶ್ ಪದ್ಯ ಕಾಡುತ್ತದೆ....
Keatsನ Grecian Urn ನ piperನಾನಾಗತ್ತೇನೆ
ಪತ್ರಿಕೋದ್ಯಮ ತರಗತಿಯಲ್ಲಿ ಹೆಸರೂರೊಂದು ಗೊತ್ತಿರದ
ನನ್ನ ಬಾಳ ಪಯಣದ ಅರ್ಧದಾರಿಯಲ್ಲಿ ಜೊತೆಯಾಗಿ,,
ಕೊನೆ ತನಕ ನಡೆವ ಅನಾಮಧೇಯ ಯಾರಿರಬಹುದೆಂದು, 
ಕಾಲಹರಣ ಮಾಡುತ್ತೇನೆ..
ಆಗೆಲ್ಲಾ ಪೆದ್ದು ಮನಕ್ಕೆ ಬುದ್ದಿ ಗದರುತ್ತದೆ..
"ತೆಪ್ಪಗೆ ಪಾಠ ಕೇಳು..."ಎಂದು..
 
ನಾನೊಬ್ಬನೇ ಹೀಗಾ??
ಅಥವಾ ಎಲ್ಲರೂ ನನ್ನ ಹಾಗಾ??
ಮನದ ಪ್ರಶ್ನೆಗೆ ಬುದ್ಧಿ ಹೆಳುತ್ತದೆ..
ಪೆದ್ದಿ ನೀನೊಬ್ಬಳೇ ಹೀಗೆ

ಮನೆಯ ಮುಂದಿನಂಗಳದಲ್ಲಿ ಮಗುವಾಡುವುದು ಕಂಡಾಗ.
ನನ್ನ ಮನವು ಮಗುವಂತೆ ರಚ್ಚೆ ಹಿಡಿಯುತ್ತದೆ..
ನೀನು ಮಗುವಾಗು ಎಂದು...
ಎಂದಿಗು ಮಗುವಾಗೆ ಉಳಿಯುವುದಾದರೆ ನಿನಗೇಕೆ..ಬದುಕು..?
ಯಾವಾಗ ಹೇಗ್ಹೇಗೆ ಇರಬೇಕೋ ಹಾಗಿದ್ದರೇ ಚಂದ..
ಅದೇ ಬದುಕಿಗಂದ..ಸುಮ್ಮನಿರು..ಎಂದು..
ಮತ್ತೆ ನನ್ನ ಬುದ್ಧಿ ತನ್ನ ಕೆಲಸ ಮಾಡುತ್ತದೆ

ಇದನ್ನೆಲ್ಲ ನೋಡಿದಾಗ ನೆನಪುಗಳೆಲ್ಲ ಕಾಡಿದಾಗ,,
ಈ ಬದುಕು ಭ್ರಮೆಗಳ ಜಾಲ..ಕನಸೇ ಅದರ ಒಡಲಾಳ....
ಅಂದುಕೊಳ್ಳುತ್ತೇನೆ.....
ಮತ್ತೆ ಮನಕ್ಕೆ ಬುದ್ಧಿ ಕಿವಿಯ ಹಿಡಿಯುತ್ತದೆ

ಒಮ್ಮೆ ಕನಸ ಸಾಗರದಿಂದ ವಾಸ್ತವದಂಚಿಗೆ ಬಾ
ನೀನು ಒಂದು ಗುರಿಯಿಟ್ಟು ಅದರೆಡೆಗಗೆ ನಡೆ..
ಎಚ್ಚರಾಗು.... ಎದ್ದು ಓಡು..
ಇನ್ನು ತುಂಬಾ ದೂರ ಹೋಗಬೇಕಿದೆ ನೀನು

ಮತ್ತೆ ನಾನು ಗುರಿ ಮುಟ್ಟಿ ಜಯಶಾಲಿಯಾಗುವ ಕನಸು ಕಾಣುತ್ತೇನೆ...
ಆದರೆ ಕೇವಲ ಭ್ರಮೆಯ ಬದುಕಲಲ್ಲ..ವಾಸ್ತವದಲ್ಲಿ
ಅಪ್ಪ-ಅಮ್ಮ ಹೇಳಿದಾಗೆ ಒಂದೇ ಕೆಲಸ ಸರಿಯಾಗಿ ಮಾಡುವ 
ಗಟ್ಟ್ತಿ  ನಿರ್ಧಾರದಲ್ಲಿ ........


Sunday, November 23, 2008

ಮರಳಿ ತವರ ಮಣ್ಣಿಗೆ.....

ಅಳೆಯಲಾಗದ ಅಳತೆಯ ಉದ್ದಗಲದ ರಸ್ತೆಗಳು,
ಮುಗಿಲ ಚುಂಬನಕೆ ಕಾದಿರುವ ಕಟ್ಟಡಗಳು,
ಕಣ್ಮುಚ್ಚಿದರೂ ಮತ್ತೆಕಣ್ಬಿಟ್ಟು ನೋಡಬೇಕೆನಿಸುವ ದೀಪಗಳು,
ಮಾನವನೇ ಪ್ರಾಣವಿರದೇ ನಿಂತಂತ ಪ್ರತಿಮೆಗಳು,
ಈ ಅಧ್ಬುತಗಳನ್ನೆಲ್ಲ ತಿರು-ತಿರುಗಿ ನೋಡುತ್ತ,,
ಆ ನೆಲದ ಅನುಭಂದ ಅಲ್ಲೆ ಮರೆಯುತ್ತ..
ಎಲ್ಲ ಬರುತ್ತಿದಾರೀಗ....ಮತ್ತಿಲ್ಲಿಗೆ,
ಮರಳಿ ಈ ತವರ ಮಣ್ಣಿಗೆ..
ಅಲ್ಲೀಗ ರಸ್ತೆಗಳು ಮುದುರಿ ಮಲಗಲಾರಂಭಸಿವೆ,
ಕಟ್ಟಡಗಳು ಬೆಳೆದಂತೆ ನಸುನಾಚಿ ತಲೆಯ ತಗ್ಗಿಸಿವೆ,
ದೀಪಗಳ ಬೆಳಕು ಖುಶಿಗೊಳಿಸದಷ್ಟು ಪ್ರಖರತೆಯ ನೀಡುತಿದೆ,
ಪ್ರತಿಮೆಗಳೇ ಎದ್ದು ಬಂದು ಕಾಡಿದಂತೆನಿಸಲರಂಭಿಸಿದೆ,
ಹಣದ ಎಲೆಯುದುರಿಸುವ ಮರಗಳಲ್ಲೀಗ,
ಎಣಿಕೆ ಸಿಗುವಷ್ಟು ಮಾತ್ರ ಎಲೆಗೆಳಿವೆ..
ಹೀಗಾಗಿ ಎಲ್ಲ ಮತ್ತೆ ಬರುತ್ತಿದ್ದಾರೆ,
ಮರಳಿ ತವರ ಮನೆ ಬಾಗಿಲಿಗೆ!!!
ಹಾಸಿಗೆಯಗಲದ ರಸ್ತೆಗಳಲ್ಲಿ,
ಭವಿಷ್ಯದ ದಾರಿ ಹುಡುಕುತ್ತ..
ಅಂಗೈಯ್ಯಗಲದ ಮನೆಗಳಲ್ಲಿ,
ನೆಮ್ಮದಿಯ ಕನಸು ಕಾಣುತ್ತ...
ಕರುಣಾಳು ಕಾಂತಿಯ ಆ ಬಡ ಬೆಳಕಿನಲ್ಲಿ,
ನಾಳಿನ ಬದುಕಿನ ಹೊಂಗನಸ ಅರಸುತ್ತ...
ಆಲದ ಮರದ ಗಾಳಿಯಲಿ ನಲಿವಾಗ,,
ಹವ ನಿಯಂತ್ರಿತ ಕೊಠಡಿಯ ನೆನಪ ಮರೆಯುತ್ತ..
ಕಪ್ಪು,ಕಂದು,ಜೇಡಿ ಕೆಮ್ಮಣ್ಣಿನಲ್ಲಿ,,
ಮುಂದೆ ಬದುಕು ನೆಡೆಸುವ ಚೇತನವ ಕಾಣುತ್ತ,,
ಮರಳಿ ಬಂದು ನಿಂತಿದ್ದಾರೀಗ,,
ಈ ಜನ್ಮಭೂಮಿ ಮಣ್ಣಿಗೇ...

"ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ"
ಅಡಿಗರಾಡಿದ ಮಾತು ಸುಳ್ಳಲ್ಲವಲ್ಲ???

Monday, October 13, 2008

ಮರೆಯಲಾಗದ ದಿನಗಳು ಮರಳಿ ಬರಲಿ......

ಮತ್ತದೇ ದಿನಗಳು ಮರಳಿ ಬರಬೇಕಿತ್ತು.........

ಮರಳಿನಲ್ಲೊಂದು ಚಂದದರಮನೆ ಕಟ್ಟಿ
ಅಲೆ ಅಪ್ಪಳಿಸಿ ಉರುಳಸದಂತೆ ಕಾದು
ಕೊನೆಗೂ ಅಲೆಗೆ ಸೋತು ಶರಣಾದ ದಿನಗಳು
ಅತ್ತರೂ ಮರುಕ್ಷಣವೇ ಕಣ್ಣೊರೆಸಿ ನಕ್ಕು
ಮುಳ್ಳು,ಕಲ್ಲಿಗೆ ಎಡ ಪೆಟ್ಟಾದರೂ ನಕ್ಕು
ಓಡಿ,ಓಡಿ ಮುಂದೆ ನಿಲ್ಲುವವಳು ನಾನೇ ಆಗಬೇಕೆಂಬ
ಹುಚ್ಚಿದ್ದ ಆ ಸ್ಮರಣೀಯ ದಿನಗಳು.....

ರಾತ್ರಿಯ ಕನಸಲ್ಲಿ ಪ್ರಧಾನಿಯೂ ನಾನಾಗಿ
ಹೊಸನಾಡ ಕಟ್ಟಿ,ದೇಶವಾಳಿ ಮೆರೆದು
ಸಾಮ್ರಾಜ್ಯಕ್ಕೆ ಅಧಿಪತಿಯಾಗಿ ನಲಿದಾಡಿದ ದಿನಗಳು

ಬಹುಷಃ.....
ಕನಸಲ್ಲೂ ಮರಳದ ದಿನಗಳವು
ಬಾಲ್ಯದ ಆ ಅದ್ಭುತ ದಿನಗಳು

ಪ್ರಾಸವೇ ಪದ್ಯ,ಸೌಂದರ್ಯವೇ ಪ್ರೇಮ,
ಜಾಳು ಕನಸುಗಳೇ ಜೀವನ,ಆಡಂಬರವೇ ಬದುಕು
ಎಂಬ ಅರ್ಥರದ ಹಳಹಳಿಕೆಗಳಲೇ ಮುಳುಗೆದ್ದು
ಉತ್ತರವೇ ಇರದ ಪ್ರಶ್ನೆಗಳಿಗೆ ಉತ್ತರವ ಹುಡುಕಲು
ಹೆಣಗಾಡಿ,ತಿರುಗಾಡಿ,ನಗಲಾರದೇ ಅಳುವೂ ಬರದೇ
ಸುಮ್ಮನೇ ನೀಲಿಯಾಗಸವ ನೋಡುತಿಹ ದಿನಗಳಿದು
ಬರಲೇಬಾರದಿತ್ತು ಈ ದಿನಗಳು

ಇರಬೇಕಿತ್ತು ಬಾಲ್ಯವೇ ಜೀವನ ಪರ್ಯಂತ......
ಮುಗ್ಧತೆ,ಮೌನ,ಮಮತೆ ಹುಟ್ಟಿಸುವ ನಗುನೊಡತಿಯಾಗಿ
'ಮರೆಯಲಾರದ ಮಗು' ಇದೆಂಬ ಹೊಗಳಿಕೆಗೊಡತಿಯೂ ಆಗಿ
ಎಂಬ ಕನಸು ಕಾಣುತ್ತೇನೆ...ನನಸಾಗದಿದ್ದದ್ದಿದೆಂದು ತಿಳದೂ,

ಚಿಕ್ಕವಳಾಗೇ ಉಳಿದರೆ ಪ್ರಧಾನಿಯಾಗಲಾಗದಲ್ಲ
ಕೊನೆಗದು ಕನಸಾಗೇ ಉಳದರೆ??.... ಇದೂ ನನ್ಮನದ ಮಾತೇ....

"ಹುಚ್ಚು ಕೋಡಿ ಮನಸು, ಈ ಹದಿನಾರರ ವಯಸು"
ನಿಜ ಬರಲೇಬಾರದಿತ್ತು ಈ ವಯಸ್ಸು..........

Sunday, September 14, 2008

ಮನೆಯೆದುರು ನೀನಿಲ್ಲ

ಇಂದು ನನ್ನ ಮನೆಯೆದುರು ನೀನಿಲ್ಲ
ನಿನ್ನ ಚಿಲಿಪಿಲಿಯ ಕಲರವವಿಲ್ಲ
ಜೋತಾಡುತ್ತ ನಗುವ ನಿನ್ನ ಪುಟ್ಟ ಮನೆಯೂ ಇಲ್ಲ
ಕಾಲ್ತೊಳೆವ ನಲ್ಲಿಯ ಪಕ್ಕದ ತೆಂಗಿನ ಮರದಿ ,
ನೀನಿದ್ದ ಕುರುಹೊಂದು ಉಳಿದೇ ಇಲ್ಲ
ಈಗೆಲ್ಲಿರುವೆ? ಹೇಗಿರುವೆ ನೀನು?
ನಿನ್ನ ಗಿಜಿಗುಡುವ ಬಳಗವೆಲ್ಲಿ ಹೇಳು,
ಏಕೆ ಮರೆತೆ ನೀ ಎಮ್ಮಮನೆಯಂಗಳವ
ನಿನ್ನ ಮನೆ ಮರವ ನಾವ್ ಕಡಿದರೂ ಕೂಡ,
ಪಕ್ಕದಲ್ಲಿಯೇ ನಗುತಿತ್ತಲ್ಲ ನೇರಳೆ ಮರವು
ಅಲ್ಲೆಲ್ಲೋ ನಮ್ಮ ಮನೆಯಂಗಳದಲೇ ಇರಬಹುದಿತ್ತಲ್ಲ
ಯಾವಾಗಲಾದರೊಮ್ಮೆ ನಿನ್ನ ನೆನಪಾಗಿ ನರಳುವೆ ನಾನು
ಓ ಕಂದು ಬಣ್ಣದ ಮೈಯ್ಯ ಕೆಂಪು ಕೊಕ್ಕ ಹಕ್ಕಿ,
ಎಲ್ಲಿರುವೆ ನೀ?ನಿನ್ನ ನೋಡಬೇಕಿದೆ ನನಗೆ,,,


ಬರಿ ಪ್ರಶ್ನೆಗಳೊಂದನೇ ಎದುರಿಟ್ಟೆ ನೀನು
ಉತ್ತರವೆಂದರೆ ಪ್ರಶ್ನೆಯಾಗೇ ಉಳಿದ ನನ್ನ ಬಾಳು
ನಿನ್ನಗೆಲ್ಲಿತ್ತಾಗ ಮನೆ? ಇತ್ತು ನನ್ನಂತಹದೇ ಪುಟ್ಟ ಗೂಡು
ನನ್ನ ಮನೆಯ ಕಡಿದುರುಳಿಸಿದಾಗ ಆಗಿತ್ತು,,
ನಿನ್ನ ಗೂಡಿಗೊಂದು ಚಂದದ ಮಾಡು....
ಬಂಗಾರದಂತ ಜಾಗದಲಿ ಬಂಗಾರದ ಬೆಳೆ ತೆಗೆವುದ ಮರೆತೆ;
ಹೆಸರೇ ಗೊತ್ತಿರದ ಅದಿರ ತೆಗೆಯಲೆಂದು ಆ ಜಾಗವ ಬಲಿಗಿಟ್ಟೆ
ನಸುಕ ತಂಗಾಳಿಯಲಿ ಕನಸ ಕಾಣುವುದ ಮರೆತು ನೀ,
ಬುಸುಗುಡುವ ಬಿಸಿಗಾಳಿಗೆ ಮುಖಕೊಟ್ಟೆ ಕೆಮ್ಮುತ್ತ
ಈ ಎಲ್ಲ ವಿನಾಶದ ಜೊತೆ ಬಾಳುವಾಸೆ ನನಗಿಲ್ಲ,
ಆದರೂ ಬದುಕಬೇಕಿದೆ ನೆಮ್ಮದಿಯ ಮರೆತು
ನಿನ್ನ ಮನೆಯ ಕಥೆಯಲ್ಲಇದು; ಎಲ್ಲ ಮನೆಯ ದೋಸೆಯೂ ತೂತೆ
ಎಲ್ಲೆಲ್ಲು ಸಿಗದ ನೆಮ್ಮದಿಯ ನೀನನಗೆ ಮರಳಿ ಕೊಡುವೆಯೇನು
ಕೊಡುವೆಯಾದರೆ ಹೇಳು?ತಿರುಗಿ ಬರುವೆ ನಿನ್ನ ಮನೆಗೆ

Saturday, August 2, 2008

ಆ ಒಲವ ಕೊಲುವ ಕೆಂಪು

ಇತ್ತ,
ಅವಳು ಹಾಡುತಿದ್ದಳು... ಇನ್ನೆರಡೇ ದಿನ
ನನ್ನರಸ ಬರಲು, ಸಂತಸವ ತರಲು ಇನ್ನೆರಡೇ ದಿನ
ಅವನಿರದೆ ಈಮನದ ಕೋಣೆಯಲ್ಲ ಭಣ-ಭಣ
ಅವನಾಗಮನಕೆ ಕಾಯುತಿದೆ ಮನದ ಕಣ-ಕಣ
ಅತ್ತ,
ಆತ ನಡುಗುತ್ತಿದ್ದ ಆ ಚಳಿಯ ತೆಳು ಚಾದರದೊಳಗೆ
ಮನ ಬೆಚ್ಚಗೆ ವಿಹರಿಸುತ್ತಿತ್ತು ಅವಳ ನೆನಪೊಳಗೆ
ಇನ್ನೆರಡೇ ದಿನಹುದಲ್ಲ ಅವಳು ಸೇರಲು ನನ್ನ ತೋಳೊಳಗೆ
ಓಹೋ! ಈಚಳಿಯು ಬಿಡದಲ್ಲ ಮುಳುಗಳವಳ ನೆನಪೊಳಗೆ
ಇತ್ತ,
ನಾನು ಆ ದಿನ ಉಡಬೇಕು ರಕ್ತವರ್ಣದ ಜರಿಸೀರೆ
ಎಂದುಕೊಳ್ಳುತ್ತ ನಸುನಾಚಿ ನಕ್ಕು ಕೆಂಪಾದಳಾ ನೀರೆ
ಆ ತುಂಬು ಕೆನ್ನೆಯ ಮೇಲೆ ಮುಂಗುರುಳ ನ್ರತ್ಯ
ಕಚಗುಳಿಡುತ್ತ ನೆನಪಿಸಿತ್ತವನ ಮುತ್ತಿನ ಮತ್ತನ್ನ
ಅತ್ತ,
ಆತ ನಗುತಿದ್ದ ನಕ್ಕು ಸುಮ್ಮನಗುತ್ತಿದ್ದ ಇದೇನು ಹುಚ್ಚೆಂದು
ಬೇಡುತ್ತಿದ್ದ ಒಲುಮೆಯಾ ಹಣತೆಯೆಂದು ಆರದಿರಲೆಂದು
ಬೇಗ ಬಾ.. ಓವೀರ ಗಡಿಯಲಿ ವೈರಿಗಳ ಆಕ್ರಮಣವಂಬ
ಕಹಳೆ ಕೇಳಿದೊಡೆ ಎದ್ದೋಡಿದ ಮಾತೆಯೊಡಲ ಕಾಯಲೆಂದು
ಇತ್ತ,
ಓ ನೆರಿಗೆ ನೀನೆಷ್ಟು ಚಂದ, ಈ ಕೆಂಪು ಸೀರೆಯಲ್ಲಿ
ಎಂದು ಗುನುಗುತ್ತ ಕೈಟ್ಟಳು ಕೆಂಪು ಸಿಂಧೂರದಲ್ಲಿ
ತಾಳಿಗೆ, ಬೈತಲೆಗೆ ಇಡುವ ಮೊದಲೇ ಬೊಟ್ಟು
ಕೆಂಪು ಚೆಲ್ಲಿ ಓಕುಳಿಯಾಡುತ್ತ ರಂಗವಲ್ಲಿ ಇಟ್ಟಿತಿಲ್ಲಿ
ಅತ್ತ,
ಮೈಮರೆತು ಹೋರಾಡುತ್ತಿದ್ದ ಆತ, ಮೈತುಂಬ ಕೆಂಪು
ಕರುಣೆಯಿರದ ಹ್ರದಯವೊಂದು ಇಟ್ಟಿತವನಿಗೆ ಗುಂಡು
ಕೆಂಪು ಚೆಲ್ಲಿ ಓಕುಳಿಯಾಡುತ್ತ ರಂಗವಲ್ಲಿ ಇಟ್ಟಿತಲ್ಲಿ
ಒಲವಿನ ಹೂ ಅರಳುವ ಮೊದಲೇ ಬಾಡಿ ಉದುರಿತಲ್ಲಿ
ಅತ್ತ
ಆ ಕೆಂಪಲ್ಲಿ ಮಲಗಿದ್ದಾನೆ ಆತ ಸುಮ್ಮನೇ
ಇತ್ತ ಮೈತುಂಬ ಕೆಂಪು ತುಂಬಿ ನಕ್ಕಳಿವಳು ಭಿಮ್ಮನೆ..
ಅದು ಕೊಲುವ ಕೆಂಪು,, ಇದು ಒಲವ ಕೆಂಪು..
ಕೊಲುವ ಕೆಂಪು, ಒಲವ ಕೆಂಪ ಕೊಲುವ ಮೊದಲೇ,,
ಕೊಲಲಿ ಅವಳೊಲವನೇ ಅವಳು ಅಲ್ಲವೇನು?...

Saturday, July 12, 2008

ಆ ಮಾತೆಯೊಡಲಿಗೆ...

ನವಮಾಸ ಆ ಬಸಿರ ಭಾರ ಬೇಸರಿಸದೇ ಹೊತ್ತು
ನೋವನೆಲ್ಲ ನಗುತ ನುಂಗಿ ಮಮತೆಂದ ನಮ್ಮ ಹೆತ್ತು
ಒಡಲ ಕುಡಿಯ ಒಳಿತಿಗಾಗಿ ಜೀವವನ್ನೆ ಪಣಕೆ ಇಟ್ಟು
ನಡೆಯ ನುಡಿಯ ಕಲಿಸಿ,ಬದುಕಿಗೊಂದು ಅರ್ಥ ಕೊಟ್ಟ
ಆ ಮಾತೆಯೊಡಲಿಗಿಂದು, ಕೋಟಿ ಕೋಟಿ ವಂದನೆ


ಹಸಿವೆಂದು ಅತ್ತಾಗ, ಹೊಟ್ಟೆತುಂಬ ಊಟವಿಟ್ಟು
ನೋವೆಂದು ಮಲಗಿದಾಗ, ಪ್ರೀತಿಯೆಂಬ ಮದ್ದುಕೊಟ್ಟು
ಜಗಳವಾಡಿ ಅತ್ತಾಗ, ನೀತಿಪಾಠವ ಹೇಳಿಕೊಟ್ಟು
ಬದುಕ ದೋಣಿ ಮುಳುಗದಂತೆ ನಡೆಸುವುದನ್ನು ಕಲಿಸಿದ
ಆ ಮಾತೆಯೊಡಗಿಂದು, ಕೋಟಿ ಕೋಟಿ ವಂದನೆ

ಸೋತು ಕುಸಿದು ಕುಳಿತಾಗ, ಗೆಲುವ ದಾರಿ ತಿಳಿಸಿ ಕೊಟ್ಟು
ಗೆದ್ದೆನೆಂದು ಬೀಗಿದಾಗ, ಕಿವಿಯ ಹಿಂಡಿ ತಪ್ಪು ತಿಳಿಸಿ ಕೊಟ್ಟು
ಎಡವಿ ಬಿದ್ದು ಅತ್ತಾಗ, ಛಲದಿ ಮುನ್ನಡೆವ ದಾರಿ ಕಲಿಸಿಕೊಟ್ಟು
ಈ ಬದುಕನೆಂದು ಸರಿ ದಾರಿಯಲ್ಲಿ ನಡೆಸುವುದನ್ನು ಕಲಿಸಿದ
ಆ ಮಾತೆಯೊಡಲಿಗಿಂದು, ಕೋಟಿ ಕೋಟಿ ವಂದನೆ

ಮಮತೆಯೆಂಬ ಹಣತೆಗೆ ,ತ್ಯಾಗವೆಂಬ ಬತ್ತಿಯಿಟ್ಟು,
ವಾತ್ಸಲ್ಯವೆಂಬ ಎಣ್ಣೆಹಾಕಿ, ಕರುಣೆಯ ಕಡ್ಡಿಂಯಿದ ಗೀರಿ,
ಹಚ್ಚಿದಂತೆ ಇರುವುದೀ ಮಾತೆಯೆಂಬ ನಂದಾದೀಪ
ದೀಪದಾದರ್ಶದಲಿ ಬದುಕಿಗೇ ಬೆಳಕ ಬೆಳಗುತಿಹ
ಆ ಮಾತೆಯೊಡಲಿಗಿಂದು ಕೋಟಿ ಕೋಟಿ ವಂದನೆ

ಆಕೆಗೆ ದುರಾಸೆಯಿಲ್ಲ, ವಸ್ತ್ರ,ಒಡವೆಗಳ ಮೇಲೆ
ಆಕೆಯ ಕನಸೆಂದರೆ,ನಮ್ಮ ಕೊರಳ ವಿಜಯ ಮಾಲೆ
ಆಕೆ ಬದುಕ ಸಂಜೆಯಲಿ ಬಯಸುವುದೇನೆಂದರೆ
ತುತ್ತು ಅನ್ನ,ಮತ್ತು ಭರವಸೆಯ ಸೂರು,
ಅದಕೇ ನಾವ್ ದ್ರೋಹವ ಬಗೆದರೆ ಬದುಕಿದ್ದೂ,
ಸತ್ತಂತೆ ನೋಡು..!!
(ಇದು ಕೇವಲ ನನ್ನಮ್ಮನಿಗೊಂದೆ ಅಲ್ಲ..ತನ್ನಮಕ್ಕಳೊಳಿತಿಗಾಗಿ ಬದುಕಿನುದ್ದಕ್ಕೂ ಶ್ರಮಿಸಿರುವ,ಶ್ರಮಿಸುತ್ತಲೇಇರುವ ಪ್ರತಿ ಅಮ್ಮನಿಗೂ ನನ್ನ ವಂದನೆ.)

Tuesday, July 1, 2008

ಯಾರು ನೀ........???

ಪ್ರತೀ ಮುಂಜಾನೆ ಯ ತಣ್ಣನೆಯ ಶುಭೋದಯದಿ
ಪ್ರತಿ ಮುಸ್ಸಂಜೆಯ ಮಾತಿರದ ಮೌನದಲ್ಲಿ
ಪ್ರತಿದಿನದ ಮುಕ್ತಾಯದ ಕನಸುಗಳ ಕಲರವದಿ
ಒಮ್ಮೆಲೇ ನೆನೆಪಾಗಿ ತಕ್ಷಣವೆ ಮರೆಯಾಗಿ ಕಾಡುತಿಹೆಯಲ್ಲ
ನೀನ್ಯಾರು ಹೇಳೋ......?
ಅರಳುತಿಹ ಮೊಗ್ಗಿನ ಆ ನಸುಗಂಪಿನೊಳಗೊಮ್ಮೆ
ಭಿಮ್ಮನೆಯ ಎಕಾಂತದ ಆ ನೀರವತೆಯೊಳಗೊಮ್ಮೆ
ನನ್ನೇ ನಾ ಮರೆತು ನಗುತಿಹ ಆ ನಗುವಿನೊಳಗೊಮ್ಮೆ
ಈ ಹುಚ್ಚು ಹುಡುಕಾಟಗಳಿಗೆನ್ನ ನೀ ತೊಡಗಿಸಿದೆಯಲ್ಲ
ನೀನ್ಯಾರು ಹೇಳೋ.....?
ಸುಮ್ಮನೊಮ್ಮೆ ನಗುವಾಗ, ಬಿಕ್ಕಳಿಸಿ ಅಳುವಾಗ
ನೆನಪುಗಳಿಗೆಲ್ಲ ವಿರಾಮ ನೀಡಿ ಬರಿ ಕನಸಿನಲ್ಲೆ ಕುಳಿತಾಗ
ಕಾರಣವೆ ಇರದೆ ಮನವೊಮ್ಮೆ ಅತ್ತಾಗ
ಈಮನದ ಕದವ ಮೆಲ್ಲನೆ ತೆಗೆದು ನಗುತ ಒಳ ಸರಿದೆಯಲ್ಲ
ನೀನ್ಯಾರು ಹೇಳೋ.......?
ಸ್ನೇಹಿತನೋ ನೀನನಗೆ, ಪ್ರಿಯತಮನೋ ನೀನನಗೆ
ನೀನ್ಯಾರೆಂಬುದನೆ ನಾನರಿಯೆನೋ ಇಂದು
ಪ್ರೇಮವಾದರೆ ಇರಲಿ, ಸ್ನೇಹವಾದರೆ ಸಿಗಲಿ
ಈ ಭಂದಕೊಂದು ನಾ ಹೆಸರಿಡೆನೋ ಎಂದೆಂದು
ಆದರೂ ಹೇಳೊಮ್ಮೆ "ಯಾರುನೀ" ಎಂದು.......