Saturday, July 12, 2008

ಆ ಮಾತೆಯೊಡಲಿಗೆ...

ನವಮಾಸ ಆ ಬಸಿರ ಭಾರ ಬೇಸರಿಸದೇ ಹೊತ್ತು
ನೋವನೆಲ್ಲ ನಗುತ ನುಂಗಿ ಮಮತೆಂದ ನಮ್ಮ ಹೆತ್ತು
ಒಡಲ ಕುಡಿಯ ಒಳಿತಿಗಾಗಿ ಜೀವವನ್ನೆ ಪಣಕೆ ಇಟ್ಟು
ನಡೆಯ ನುಡಿಯ ಕಲಿಸಿ,ಬದುಕಿಗೊಂದು ಅರ್ಥ ಕೊಟ್ಟ
ಆ ಮಾತೆಯೊಡಲಿಗಿಂದು, ಕೋಟಿ ಕೋಟಿ ವಂದನೆ


ಹಸಿವೆಂದು ಅತ್ತಾಗ, ಹೊಟ್ಟೆತುಂಬ ಊಟವಿಟ್ಟು
ನೋವೆಂದು ಮಲಗಿದಾಗ, ಪ್ರೀತಿಯೆಂಬ ಮದ್ದುಕೊಟ್ಟು
ಜಗಳವಾಡಿ ಅತ್ತಾಗ, ನೀತಿಪಾಠವ ಹೇಳಿಕೊಟ್ಟು
ಬದುಕ ದೋಣಿ ಮುಳುಗದಂತೆ ನಡೆಸುವುದನ್ನು ಕಲಿಸಿದ
ಆ ಮಾತೆಯೊಡಗಿಂದು, ಕೋಟಿ ಕೋಟಿ ವಂದನೆ

ಸೋತು ಕುಸಿದು ಕುಳಿತಾಗ, ಗೆಲುವ ದಾರಿ ತಿಳಿಸಿ ಕೊಟ್ಟು
ಗೆದ್ದೆನೆಂದು ಬೀಗಿದಾಗ, ಕಿವಿಯ ಹಿಂಡಿ ತಪ್ಪು ತಿಳಿಸಿ ಕೊಟ್ಟು
ಎಡವಿ ಬಿದ್ದು ಅತ್ತಾಗ, ಛಲದಿ ಮುನ್ನಡೆವ ದಾರಿ ಕಲಿಸಿಕೊಟ್ಟು
ಈ ಬದುಕನೆಂದು ಸರಿ ದಾರಿಯಲ್ಲಿ ನಡೆಸುವುದನ್ನು ಕಲಿಸಿದ
ಆ ಮಾತೆಯೊಡಲಿಗಿಂದು, ಕೋಟಿ ಕೋಟಿ ವಂದನೆ

ಮಮತೆಯೆಂಬ ಹಣತೆಗೆ ,ತ್ಯಾಗವೆಂಬ ಬತ್ತಿಯಿಟ್ಟು,
ವಾತ್ಸಲ್ಯವೆಂಬ ಎಣ್ಣೆಹಾಕಿ, ಕರುಣೆಯ ಕಡ್ಡಿಂಯಿದ ಗೀರಿ,
ಹಚ್ಚಿದಂತೆ ಇರುವುದೀ ಮಾತೆಯೆಂಬ ನಂದಾದೀಪ
ದೀಪದಾದರ್ಶದಲಿ ಬದುಕಿಗೇ ಬೆಳಕ ಬೆಳಗುತಿಹ
ಆ ಮಾತೆಯೊಡಲಿಗಿಂದು ಕೋಟಿ ಕೋಟಿ ವಂದನೆ

ಆಕೆಗೆ ದುರಾಸೆಯಿಲ್ಲ, ವಸ್ತ್ರ,ಒಡವೆಗಳ ಮೇಲೆ
ಆಕೆಯ ಕನಸೆಂದರೆ,ನಮ್ಮ ಕೊರಳ ವಿಜಯ ಮಾಲೆ
ಆಕೆ ಬದುಕ ಸಂಜೆಯಲಿ ಬಯಸುವುದೇನೆಂದರೆ
ತುತ್ತು ಅನ್ನ,ಮತ್ತು ಭರವಸೆಯ ಸೂರು,
ಅದಕೇ ನಾವ್ ದ್ರೋಹವ ಬಗೆದರೆ ಬದುಕಿದ್ದೂ,
ಸತ್ತಂತೆ ನೋಡು..!!
(ಇದು ಕೇವಲ ನನ್ನಮ್ಮನಿಗೊಂದೆ ಅಲ್ಲ..ತನ್ನಮಕ್ಕಳೊಳಿತಿಗಾಗಿ ಬದುಕಿನುದ್ದಕ್ಕೂ ಶ್ರಮಿಸಿರುವ,ಶ್ರಮಿಸುತ್ತಲೇಇರುವ ಪ್ರತಿ ಅಮ್ಮನಿಗೂ ನನ್ನ ವಂದನೆ.)

Tuesday, July 1, 2008

ಯಾರು ನೀ........???

ಪ್ರತೀ ಮುಂಜಾನೆ ಯ ತಣ್ಣನೆಯ ಶುಭೋದಯದಿ
ಪ್ರತಿ ಮುಸ್ಸಂಜೆಯ ಮಾತಿರದ ಮೌನದಲ್ಲಿ
ಪ್ರತಿದಿನದ ಮುಕ್ತಾಯದ ಕನಸುಗಳ ಕಲರವದಿ
ಒಮ್ಮೆಲೇ ನೆನೆಪಾಗಿ ತಕ್ಷಣವೆ ಮರೆಯಾಗಿ ಕಾಡುತಿಹೆಯಲ್ಲ
ನೀನ್ಯಾರು ಹೇಳೋ......?
ಅರಳುತಿಹ ಮೊಗ್ಗಿನ ಆ ನಸುಗಂಪಿನೊಳಗೊಮ್ಮೆ
ಭಿಮ್ಮನೆಯ ಎಕಾಂತದ ಆ ನೀರವತೆಯೊಳಗೊಮ್ಮೆ
ನನ್ನೇ ನಾ ಮರೆತು ನಗುತಿಹ ಆ ನಗುವಿನೊಳಗೊಮ್ಮೆ
ಈ ಹುಚ್ಚು ಹುಡುಕಾಟಗಳಿಗೆನ್ನ ನೀ ತೊಡಗಿಸಿದೆಯಲ್ಲ
ನೀನ್ಯಾರು ಹೇಳೋ.....?
ಸುಮ್ಮನೊಮ್ಮೆ ನಗುವಾಗ, ಬಿಕ್ಕಳಿಸಿ ಅಳುವಾಗ
ನೆನಪುಗಳಿಗೆಲ್ಲ ವಿರಾಮ ನೀಡಿ ಬರಿ ಕನಸಿನಲ್ಲೆ ಕುಳಿತಾಗ
ಕಾರಣವೆ ಇರದೆ ಮನವೊಮ್ಮೆ ಅತ್ತಾಗ
ಈಮನದ ಕದವ ಮೆಲ್ಲನೆ ತೆಗೆದು ನಗುತ ಒಳ ಸರಿದೆಯಲ್ಲ
ನೀನ್ಯಾರು ಹೇಳೋ.......?
ಸ್ನೇಹಿತನೋ ನೀನನಗೆ, ಪ್ರಿಯತಮನೋ ನೀನನಗೆ
ನೀನ್ಯಾರೆಂಬುದನೆ ನಾನರಿಯೆನೋ ಇಂದು
ಪ್ರೇಮವಾದರೆ ಇರಲಿ, ಸ್ನೇಹವಾದರೆ ಸಿಗಲಿ
ಈ ಭಂದಕೊಂದು ನಾ ಹೆಸರಿಡೆನೋ ಎಂದೆಂದು
ಆದರೂ ಹೇಳೊಮ್ಮೆ "ಯಾರುನೀ" ಎಂದು.......