Sunday, September 14, 2008

ಮನೆಯೆದುರು ನೀನಿಲ್ಲ

ಇಂದು ನನ್ನ ಮನೆಯೆದುರು ನೀನಿಲ್ಲ
ನಿನ್ನ ಚಿಲಿಪಿಲಿಯ ಕಲರವವಿಲ್ಲ
ಜೋತಾಡುತ್ತ ನಗುವ ನಿನ್ನ ಪುಟ್ಟ ಮನೆಯೂ ಇಲ್ಲ
ಕಾಲ್ತೊಳೆವ ನಲ್ಲಿಯ ಪಕ್ಕದ ತೆಂಗಿನ ಮರದಿ ,
ನೀನಿದ್ದ ಕುರುಹೊಂದು ಉಳಿದೇ ಇಲ್ಲ
ಈಗೆಲ್ಲಿರುವೆ? ಹೇಗಿರುವೆ ನೀನು?
ನಿನ್ನ ಗಿಜಿಗುಡುವ ಬಳಗವೆಲ್ಲಿ ಹೇಳು,
ಏಕೆ ಮರೆತೆ ನೀ ಎಮ್ಮಮನೆಯಂಗಳವ
ನಿನ್ನ ಮನೆ ಮರವ ನಾವ್ ಕಡಿದರೂ ಕೂಡ,
ಪಕ್ಕದಲ್ಲಿಯೇ ನಗುತಿತ್ತಲ್ಲ ನೇರಳೆ ಮರವು
ಅಲ್ಲೆಲ್ಲೋ ನಮ್ಮ ಮನೆಯಂಗಳದಲೇ ಇರಬಹುದಿತ್ತಲ್ಲ
ಯಾವಾಗಲಾದರೊಮ್ಮೆ ನಿನ್ನ ನೆನಪಾಗಿ ನರಳುವೆ ನಾನು
ಓ ಕಂದು ಬಣ್ಣದ ಮೈಯ್ಯ ಕೆಂಪು ಕೊಕ್ಕ ಹಕ್ಕಿ,
ಎಲ್ಲಿರುವೆ ನೀ?ನಿನ್ನ ನೋಡಬೇಕಿದೆ ನನಗೆ,,,


ಬರಿ ಪ್ರಶ್ನೆಗಳೊಂದನೇ ಎದುರಿಟ್ಟೆ ನೀನು
ಉತ್ತರವೆಂದರೆ ಪ್ರಶ್ನೆಯಾಗೇ ಉಳಿದ ನನ್ನ ಬಾಳು
ನಿನ್ನಗೆಲ್ಲಿತ್ತಾಗ ಮನೆ? ಇತ್ತು ನನ್ನಂತಹದೇ ಪುಟ್ಟ ಗೂಡು
ನನ್ನ ಮನೆಯ ಕಡಿದುರುಳಿಸಿದಾಗ ಆಗಿತ್ತು,,
ನಿನ್ನ ಗೂಡಿಗೊಂದು ಚಂದದ ಮಾಡು....
ಬಂಗಾರದಂತ ಜಾಗದಲಿ ಬಂಗಾರದ ಬೆಳೆ ತೆಗೆವುದ ಮರೆತೆ;
ಹೆಸರೇ ಗೊತ್ತಿರದ ಅದಿರ ತೆಗೆಯಲೆಂದು ಆ ಜಾಗವ ಬಲಿಗಿಟ್ಟೆ
ನಸುಕ ತಂಗಾಳಿಯಲಿ ಕನಸ ಕಾಣುವುದ ಮರೆತು ನೀ,
ಬುಸುಗುಡುವ ಬಿಸಿಗಾಳಿಗೆ ಮುಖಕೊಟ್ಟೆ ಕೆಮ್ಮುತ್ತ
ಈ ಎಲ್ಲ ವಿನಾಶದ ಜೊತೆ ಬಾಳುವಾಸೆ ನನಗಿಲ್ಲ,
ಆದರೂ ಬದುಕಬೇಕಿದೆ ನೆಮ್ಮದಿಯ ಮರೆತು
ನಿನ್ನ ಮನೆಯ ಕಥೆಯಲ್ಲಇದು; ಎಲ್ಲ ಮನೆಯ ದೋಸೆಯೂ ತೂತೆ
ಎಲ್ಲೆಲ್ಲು ಸಿಗದ ನೆಮ್ಮದಿಯ ನೀನನಗೆ ಮರಳಿ ಕೊಡುವೆಯೇನು
ಕೊಡುವೆಯಾದರೆ ಹೇಳು?ತಿರುಗಿ ಬರುವೆ ನಿನ್ನ ಮನೆಗೆ

4 comments:

ವಿಜಯ್ ಜೋಶಿ said...

thumba dinagaLa nantara ondu sundaravaada kavana.

ವಿನಾಯಕ ಭಟ್ಟ said...

ಚೆನಾಗಿದೆ ಕಣ್ರಿ. ಹೆಚ್ಚಾಗಿ ಬ್ಲಾಗುಗಳಲ್ಲಿ ಎಲ್ಲರೂ ಕವನ ೋದ್ತಾರೆ. ಬ್ಲಾಗುಗಳನ್ನು ಗಮನಿಸಿ ಕವನಗಳಿಗೇ ಹೆಚ್ಚು ಓದುಗರಿರೋದು. ಆದರೆ ನಾನು ಗದ್ಯ ೋದೋದು ಜಾಸ್ತಿ. ಆದ್ರೂ ನಿಮ್ಮ ಕವನಗಳನ್ನು ಓದ್ತೀನಿ. ಯಾಕಂದ್ರೆ ಅವು ಇಷ್ಟವಾಗ್ವೆ.
ನನ್ನ ಕಾಮೆಂಟ್ಗೆ ಪ್ರತಿಕ್ರಿಯಸುತ್ತ ನನ್ನನ್ನು ಅಣ್ಣ ಅಂದಿದ್ದೀಯಾ. ಥ್ಯಾಂಕ್ಸ್ ತಂಗಿ... ಇಷ್ಟೊಳ್ಳೆ ಕವನ ಬರೆಯುವವಳು ತಂಗಿಯಾಗುತ್ತೇನೆಂದರೆ ಬೇಡವೆನ್ನಲಾದೀತೆ?

ವಿನಾಯಕ ಭಟ್ಟ said...

ನಿನ್ನ ೊಲವ ಕೊಲುವ ಕೆಂಪು ಕವನ ಮತ್ತೊಮ್ಮೆ ಓದಿದೆ. ನನಗ್ಯಾಕೋ ಬಿ.ಆರ್. ಲಕ್ಷ್ಮಣರಾವ್ ಅವರ ಕವನವೊಂದು ನೆನಪಾಯ್ತು. ಬಹುಶಃ ನೀನು ಕೇಳಿರುತ್ತೀಯಾ...

GIRI MANE said...

kavana oduvdu aparoopa, nimma kavana gallannu oddida mele matte odabeku anisive, ashtu manakke muda nidive