Saturday, August 2, 2008

ಆ ಒಲವ ಕೊಲುವ ಕೆಂಪು

ಇತ್ತ,
ಅವಳು ಹಾಡುತಿದ್ದಳು... ಇನ್ನೆರಡೇ ದಿನ
ನನ್ನರಸ ಬರಲು, ಸಂತಸವ ತರಲು ಇನ್ನೆರಡೇ ದಿನ
ಅವನಿರದೆ ಈಮನದ ಕೋಣೆಯಲ್ಲ ಭಣ-ಭಣ
ಅವನಾಗಮನಕೆ ಕಾಯುತಿದೆ ಮನದ ಕಣ-ಕಣ
ಅತ್ತ,
ಆತ ನಡುಗುತ್ತಿದ್ದ ಆ ಚಳಿಯ ತೆಳು ಚಾದರದೊಳಗೆ
ಮನ ಬೆಚ್ಚಗೆ ವಿಹರಿಸುತ್ತಿತ್ತು ಅವಳ ನೆನಪೊಳಗೆ
ಇನ್ನೆರಡೇ ದಿನಹುದಲ್ಲ ಅವಳು ಸೇರಲು ನನ್ನ ತೋಳೊಳಗೆ
ಓಹೋ! ಈಚಳಿಯು ಬಿಡದಲ್ಲ ಮುಳುಗಳವಳ ನೆನಪೊಳಗೆ
ಇತ್ತ,
ನಾನು ಆ ದಿನ ಉಡಬೇಕು ರಕ್ತವರ್ಣದ ಜರಿಸೀರೆ
ಎಂದುಕೊಳ್ಳುತ್ತ ನಸುನಾಚಿ ನಕ್ಕು ಕೆಂಪಾದಳಾ ನೀರೆ
ಆ ತುಂಬು ಕೆನ್ನೆಯ ಮೇಲೆ ಮುಂಗುರುಳ ನ್ರತ್ಯ
ಕಚಗುಳಿಡುತ್ತ ನೆನಪಿಸಿತ್ತವನ ಮುತ್ತಿನ ಮತ್ತನ್ನ
ಅತ್ತ,
ಆತ ನಗುತಿದ್ದ ನಕ್ಕು ಸುಮ್ಮನಗುತ್ತಿದ್ದ ಇದೇನು ಹುಚ್ಚೆಂದು
ಬೇಡುತ್ತಿದ್ದ ಒಲುಮೆಯಾ ಹಣತೆಯೆಂದು ಆರದಿರಲೆಂದು
ಬೇಗ ಬಾ.. ಓವೀರ ಗಡಿಯಲಿ ವೈರಿಗಳ ಆಕ್ರಮಣವಂಬ
ಕಹಳೆ ಕೇಳಿದೊಡೆ ಎದ್ದೋಡಿದ ಮಾತೆಯೊಡಲ ಕಾಯಲೆಂದು
ಇತ್ತ,
ಓ ನೆರಿಗೆ ನೀನೆಷ್ಟು ಚಂದ, ಈ ಕೆಂಪು ಸೀರೆಯಲ್ಲಿ
ಎಂದು ಗುನುಗುತ್ತ ಕೈಟ್ಟಳು ಕೆಂಪು ಸಿಂಧೂರದಲ್ಲಿ
ತಾಳಿಗೆ, ಬೈತಲೆಗೆ ಇಡುವ ಮೊದಲೇ ಬೊಟ್ಟು
ಕೆಂಪು ಚೆಲ್ಲಿ ಓಕುಳಿಯಾಡುತ್ತ ರಂಗವಲ್ಲಿ ಇಟ್ಟಿತಿಲ್ಲಿ
ಅತ್ತ,
ಮೈಮರೆತು ಹೋರಾಡುತ್ತಿದ್ದ ಆತ, ಮೈತುಂಬ ಕೆಂಪು
ಕರುಣೆಯಿರದ ಹ್ರದಯವೊಂದು ಇಟ್ಟಿತವನಿಗೆ ಗುಂಡು
ಕೆಂಪು ಚೆಲ್ಲಿ ಓಕುಳಿಯಾಡುತ್ತ ರಂಗವಲ್ಲಿ ಇಟ್ಟಿತಲ್ಲಿ
ಒಲವಿನ ಹೂ ಅರಳುವ ಮೊದಲೇ ಬಾಡಿ ಉದುರಿತಲ್ಲಿ
ಅತ್ತ
ಆ ಕೆಂಪಲ್ಲಿ ಮಲಗಿದ್ದಾನೆ ಆತ ಸುಮ್ಮನೇ
ಇತ್ತ ಮೈತುಂಬ ಕೆಂಪು ತುಂಬಿ ನಕ್ಕಳಿವಳು ಭಿಮ್ಮನೆ..
ಅದು ಕೊಲುವ ಕೆಂಪು,, ಇದು ಒಲವ ಕೆಂಪು..
ಕೊಲುವ ಕೆಂಪು, ಒಲವ ಕೆಂಪ ಕೊಲುವ ಮೊದಲೇ,,
ಕೊಲಲಿ ಅವಳೊಲವನೇ ಅವಳು ಅಲ್ಲವೇನು?...