Monday, October 13, 2008

ಮರೆಯಲಾಗದ ದಿನಗಳು ಮರಳಿ ಬರಲಿ......

ಮತ್ತದೇ ದಿನಗಳು ಮರಳಿ ಬರಬೇಕಿತ್ತು.........

ಮರಳಿನಲ್ಲೊಂದು ಚಂದದರಮನೆ ಕಟ್ಟಿ
ಅಲೆ ಅಪ್ಪಳಿಸಿ ಉರುಳಸದಂತೆ ಕಾದು
ಕೊನೆಗೂ ಅಲೆಗೆ ಸೋತು ಶರಣಾದ ದಿನಗಳು
ಅತ್ತರೂ ಮರುಕ್ಷಣವೇ ಕಣ್ಣೊರೆಸಿ ನಕ್ಕು
ಮುಳ್ಳು,ಕಲ್ಲಿಗೆ ಎಡ ಪೆಟ್ಟಾದರೂ ನಕ್ಕು
ಓಡಿ,ಓಡಿ ಮುಂದೆ ನಿಲ್ಲುವವಳು ನಾನೇ ಆಗಬೇಕೆಂಬ
ಹುಚ್ಚಿದ್ದ ಆ ಸ್ಮರಣೀಯ ದಿನಗಳು.....

ರಾತ್ರಿಯ ಕನಸಲ್ಲಿ ಪ್ರಧಾನಿಯೂ ನಾನಾಗಿ
ಹೊಸನಾಡ ಕಟ್ಟಿ,ದೇಶವಾಳಿ ಮೆರೆದು
ಸಾಮ್ರಾಜ್ಯಕ್ಕೆ ಅಧಿಪತಿಯಾಗಿ ನಲಿದಾಡಿದ ದಿನಗಳು

ಬಹುಷಃ.....
ಕನಸಲ್ಲೂ ಮರಳದ ದಿನಗಳವು
ಬಾಲ್ಯದ ಆ ಅದ್ಭುತ ದಿನಗಳು

ಪ್ರಾಸವೇ ಪದ್ಯ,ಸೌಂದರ್ಯವೇ ಪ್ರೇಮ,
ಜಾಳು ಕನಸುಗಳೇ ಜೀವನ,ಆಡಂಬರವೇ ಬದುಕು
ಎಂಬ ಅರ್ಥರದ ಹಳಹಳಿಕೆಗಳಲೇ ಮುಳುಗೆದ್ದು
ಉತ್ತರವೇ ಇರದ ಪ್ರಶ್ನೆಗಳಿಗೆ ಉತ್ತರವ ಹುಡುಕಲು
ಹೆಣಗಾಡಿ,ತಿರುಗಾಡಿ,ನಗಲಾರದೇ ಅಳುವೂ ಬರದೇ
ಸುಮ್ಮನೇ ನೀಲಿಯಾಗಸವ ನೋಡುತಿಹ ದಿನಗಳಿದು
ಬರಲೇಬಾರದಿತ್ತು ಈ ದಿನಗಳು

ಇರಬೇಕಿತ್ತು ಬಾಲ್ಯವೇ ಜೀವನ ಪರ್ಯಂತ......
ಮುಗ್ಧತೆ,ಮೌನ,ಮಮತೆ ಹುಟ್ಟಿಸುವ ನಗುನೊಡತಿಯಾಗಿ
'ಮರೆಯಲಾರದ ಮಗು' ಇದೆಂಬ ಹೊಗಳಿಕೆಗೊಡತಿಯೂ ಆಗಿ
ಎಂಬ ಕನಸು ಕಾಣುತ್ತೇನೆ...ನನಸಾಗದಿದ್ದದ್ದಿದೆಂದು ತಿಳದೂ,

ಚಿಕ್ಕವಳಾಗೇ ಉಳಿದರೆ ಪ್ರಧಾನಿಯಾಗಲಾಗದಲ್ಲ
ಕೊನೆಗದು ಕನಸಾಗೇ ಉಳದರೆ??.... ಇದೂ ನನ್ಮನದ ಮಾತೇ....

"ಹುಚ್ಚು ಕೋಡಿ ಮನಸು, ಈ ಹದಿನಾರರ ವಯಸು"
ನಿಜ ಬರಲೇಬಾರದಿತ್ತು ಈ ವಯಸ್ಸು..........