Saturday, July 12, 2008

ಆ ಮಾತೆಯೊಡಲಿಗೆ...

ನವಮಾಸ ಆ ಬಸಿರ ಭಾರ ಬೇಸರಿಸದೇ ಹೊತ್ತು
ನೋವನೆಲ್ಲ ನಗುತ ನುಂಗಿ ಮಮತೆಂದ ನಮ್ಮ ಹೆತ್ತು
ಒಡಲ ಕುಡಿಯ ಒಳಿತಿಗಾಗಿ ಜೀವವನ್ನೆ ಪಣಕೆ ಇಟ್ಟು
ನಡೆಯ ನುಡಿಯ ಕಲಿಸಿ,ಬದುಕಿಗೊಂದು ಅರ್ಥ ಕೊಟ್ಟ
ಆ ಮಾತೆಯೊಡಲಿಗಿಂದು, ಕೋಟಿ ಕೋಟಿ ವಂದನೆ


ಹಸಿವೆಂದು ಅತ್ತಾಗ, ಹೊಟ್ಟೆತುಂಬ ಊಟವಿಟ್ಟು
ನೋವೆಂದು ಮಲಗಿದಾಗ, ಪ್ರೀತಿಯೆಂಬ ಮದ್ದುಕೊಟ್ಟು
ಜಗಳವಾಡಿ ಅತ್ತಾಗ, ನೀತಿಪಾಠವ ಹೇಳಿಕೊಟ್ಟು
ಬದುಕ ದೋಣಿ ಮುಳುಗದಂತೆ ನಡೆಸುವುದನ್ನು ಕಲಿಸಿದ
ಆ ಮಾತೆಯೊಡಗಿಂದು, ಕೋಟಿ ಕೋಟಿ ವಂದನೆ

ಸೋತು ಕುಸಿದು ಕುಳಿತಾಗ, ಗೆಲುವ ದಾರಿ ತಿಳಿಸಿ ಕೊಟ್ಟು
ಗೆದ್ದೆನೆಂದು ಬೀಗಿದಾಗ, ಕಿವಿಯ ಹಿಂಡಿ ತಪ್ಪು ತಿಳಿಸಿ ಕೊಟ್ಟು
ಎಡವಿ ಬಿದ್ದು ಅತ್ತಾಗ, ಛಲದಿ ಮುನ್ನಡೆವ ದಾರಿ ಕಲಿಸಿಕೊಟ್ಟು
ಈ ಬದುಕನೆಂದು ಸರಿ ದಾರಿಯಲ್ಲಿ ನಡೆಸುವುದನ್ನು ಕಲಿಸಿದ
ಆ ಮಾತೆಯೊಡಲಿಗಿಂದು, ಕೋಟಿ ಕೋಟಿ ವಂದನೆ

ಮಮತೆಯೆಂಬ ಹಣತೆಗೆ ,ತ್ಯಾಗವೆಂಬ ಬತ್ತಿಯಿಟ್ಟು,
ವಾತ್ಸಲ್ಯವೆಂಬ ಎಣ್ಣೆಹಾಕಿ, ಕರುಣೆಯ ಕಡ್ಡಿಂಯಿದ ಗೀರಿ,
ಹಚ್ಚಿದಂತೆ ಇರುವುದೀ ಮಾತೆಯೆಂಬ ನಂದಾದೀಪ
ದೀಪದಾದರ್ಶದಲಿ ಬದುಕಿಗೇ ಬೆಳಕ ಬೆಳಗುತಿಹ
ಆ ಮಾತೆಯೊಡಲಿಗಿಂದು ಕೋಟಿ ಕೋಟಿ ವಂದನೆ

ಆಕೆಗೆ ದುರಾಸೆಯಿಲ್ಲ, ವಸ್ತ್ರ,ಒಡವೆಗಳ ಮೇಲೆ
ಆಕೆಯ ಕನಸೆಂದರೆ,ನಮ್ಮ ಕೊರಳ ವಿಜಯ ಮಾಲೆ
ಆಕೆ ಬದುಕ ಸಂಜೆಯಲಿ ಬಯಸುವುದೇನೆಂದರೆ
ತುತ್ತು ಅನ್ನ,ಮತ್ತು ಭರವಸೆಯ ಸೂರು,
ಅದಕೇ ನಾವ್ ದ್ರೋಹವ ಬಗೆದರೆ ಬದುಕಿದ್ದೂ,
ಸತ್ತಂತೆ ನೋಡು..!!
(ಇದು ಕೇವಲ ನನ್ನಮ್ಮನಿಗೊಂದೆ ಅಲ್ಲ..ತನ್ನಮಕ್ಕಳೊಳಿತಿಗಾಗಿ ಬದುಕಿನುದ್ದಕ್ಕೂ ಶ್ರಮಿಸಿರುವ,ಶ್ರಮಿಸುತ್ತಲೇಇರುವ ಪ್ರತಿ ಅಮ್ಮನಿಗೂ ನನ್ನ ವಂದನೆ.)

7 comments:

ವಿಜಯ್ ಜೋಶಿ said...

ಕವನ ಓದಿದೆ. ತುಂಬಾ ಚೆನ್ನಾಗಿದೆ. ಕನ್ನಡ ಸಾಹಿತ್ಯವನ್ನು ಅಕಾಡೆಮಿಕ್ ಆಗಿ ನಾನು ಓದಿರದ ಕಾರಣ ಕವನವು ಹೇಗಿರಬೇಕು, ಹೇಗಿರಬಾರದು ಎಂದು ಹೇಳುವಷ್ಟು ತಾಕತ್ತು ನನಗಿಲ್ಲ. ಆದರೆ ಈ ಕವನ ನನಗೆ ತುಂಬಾ ಇಷ್ಟವಾಗಿದ್ದಂತೂ ನಿಜ.
ಹೆಚ್ಚೆಚ್ಚು ಬರುತ್ತಿರಲಿ ಇಂಥ ಬರಹಗಳು.

Anonymous said...

ಪತ್ರಿಕೋದ್ಯಮ ವಿದ್ಯಾರ್ಥಿಯೊಬ್ಬರಿಂದ ಇಂಥ ಕವನವನ್ನು ನಾನು ನಿರೀಕ್ಷಿಸಿರಲಿಲ್ಲ. ಏನಾದರೂ ಹೊಸತನ್ನು ಬರೆ ಹುಡ್ಗಿ. ಅದೇ ಕವನ, ಅದೇ ಹಾಡು ಸಾಕಾಗಿದೆ. ನೀವೇನು ಜಯಂತ್ ಕಾಯ್ಕಿಣಿಯಾಗಬೇಕಿಲ್ಲ.

Anonymous said...

ರಾಜೀವ್ ಅವರೆ, "ಪತ್ರಿಕೋದ್ಯಮ ವಿದ್ಯಾರ್ಥಿಯಿಂದ ಇಂಥ ಕವನ ನಿರೀಕ್ಷಿಸಿರಲಿಲ್ಲ" ಎಂಬ ಮಾತಿನ ಅರ್ಥವೇನು? ಈ ಕವನದಲ್ಲಿ ತಪ್ಪೇನಿದೆ? ಅವರವರ ಭಾವಕ್ಕೆ ತಕ್ಕಂತೆ ಬರೆಯುತ್ತಾರೆ. ಅದು ಅವರ ವ್ಯಕ್ತಿಗತ ಸ್ವಾತಂತ್ರ್ಯ. ಅದರಿಂದ ನಿಮಗೇನು ತೊಂದರೆ? ಮೊಸರಲ್ಲಿ ಕಲ್ಲು ಹುಡುಕುವ ಬುದ್ಧಿ ನಿಮಗೇಕೆ?

Anonymous said...

ತುಂಬ ಚನ್ನಾಗಿದೆ...

Anonymous said...

@
ವಿಜಯ ಜೋಶಿ
ತುಂಬಾ ಧನ್ಯವಾದಗಳು..ನಿಮ್ಮ ಪ್ರೋತ್ಸಾಹಕ್ಕೆ..
@
ರಾಜೀವ್
ನಾನಿನ್ನು ಪತ್ರಿಕೋದ್ಯಮ ಮೊದಲ ಹಂತವನ್ನು ಕಲಿಯಲಿದ್ದೇನೆ ..ಆದರೆ ನಿಮ್ಮ ನಿರೀಕ್ಸೆ ಖಂಡಿತ ಹುಸಿಯಾಗದು ಹೊಸತನ್ನು ಬರೆಯುವತ್ತ ನನ್ನ ಪ್ರಯತ್ನ ಸದಾ ಇದೆ..ಜಯಂತ ಕಾಯ್ಕಿಣಿ ಆಗೋಆಸೆ ನನಗೂ ಇಲ್ಲ

Anonymous said...

@ಲಾವಣ್ಯ
ತುಂಬ ಧನ್ಯವಾದಗಳು.....ನಿಮ್ಮ ಬೆಂಬಲಕ್ಕೆ...

Anonymous said...

ಕವನ ಚೆನ್ನಾಗಿದೆ, ಲೇಖನ ಬರೆಯಲು ಪ್ರಯತ್ನಿಸು ಏಕೆಂದರೆ ನೀನು ಪತ್ರಿಕ್ಕೋದ್ಯಮದ ವಿದ್ಯಾಥಿಱಯಾಗಿದ್ದರಿಂದ

ಹೀಗೆ ಬರೆಯುತ್ತಿರು